Friday, 10 February 2012

ಅವನೊಡನೆ ಜಾರಿತು ಹೊತ್ತು ..

( ಹೆಣ್ಣಾಗಿ ಬರೆವಾಸೆ ..)

ಬಂದನಾ ನನ್ನಿನಿಯ,
ಬಂದೊಡನೆ ಕೆನ್ನೆಗೆ-
ಬಾರಿಸಿಬಿಡುವಷ್ಟು ಸಿಟ್ಟು 
ಅವನಿಗೆ ಕಾದ ಕಾಲವಿದು 
ಕಾದ ಕಾವಲಿಯಂತೆ 
ಸುಡುತಿವೆ ಚಿಂತೆಗಳು ಮನವ
ಮೈ ಸುಡುವ ಬಿಸಿಲೊಡನೆ 

ಸೋಲದಿರು ಮನವೇ,
ಈಬಾರಿಯೂ 
ಕರಗದಿರು ಅವನ-
ಪೊಳ್ಳು ನೆಪಗಳ ಕೇಳಿ
ಉಕ್ಕದಿರು ಪ್ರೀತಿ ಇಂದವನ ಮೇಲೆ  
ಸುಡುಕೂಪವಿದು ಕೊಂಚವಾದರೂ -
ಥಳಿಸಿ ತಣಿಯಲಿ ಅವನ

ಬಂದನಿಗೋ ಅವನೇ ..
ಹಾ .. ಅವನೇ ... 
ತಾಳು ತಾಳೆ ಮನವೇ,
ಅಯ್ಯೋ ..!
ತಣ್ಣಗಾದೆಯೇ ಇಂದೂ..
ಅವನ ಕಂಡೊಡನೆ
ಉರಿವ ಕೆಂಡದ ಸೂರ್ಯ 
ಮುಳುಗುವೀ ಹೊತ್ತಿನಲ್ಲಿ 
ಶಾಂತ ಸಾಗರದಿ-
ಮುಳುಗಿಯೇ ಬಿಟ್ಟನೇ..

ಕೆಂಡದಂಥಾ ಕೋಪದ ಹಿಂದೆ
ಬಚ್ಚಿಟ್ಟುಕೊಂಡಿತ್ತೆಲ್ಲಿ  ಅವನಮೇಲಿನ-
ಹುಣ್ಣಿಮೆಯ ತಂಪು ಅನುಕಂಪ
ನಗಿಸಿಬಿಟ್ಟನಲ್ಲಾ ನಲ್ಲ
ಈಬಾರಿಯೂ ಎರೆಡು ಮಾತಿನಲೇ
ಕೊಂದುಬಿಡಲೇ ಈಬಾರಿ-
ಎಂದುಕೊಂಡವಳ

ಕಂಡೊಡನೆ ಅವನ, ಉಕ್ಕಿತೆಕೆ
ನನ್ನೆದೆಯ ಭಾವ ಪ್ರವಾಹ
ಸ್ಥಬ್ದವಾಗಲಿ ಅವನೊಡನಿರುವ -
ಈ ಹೊತ್ತು ಎನುವ ಮೋಹ

ಬಂದವನು ಹರಟಿ ಬರಿ,
ಹೊರಟಾನೇನೋ
ಮುತ್ತೊಂದ ಕೇಳಿ ಕಸೆಯುವ ತುಮುಲ 
ಚುಂಬಿಸಲು ಬರಲವನ ತುಟಿಗಳು
ನಾಚಿದವು ಕೆನ್ನೆ, ಆಶೆಯಲಿ ಮುಂಗುರುಳು 
ಮುಚ್ಚಿದ ಕಣ್ಣುಗಳು ಕಂಡಿಲ್ಲ ಮುಂದಿನದ 
ಅನುಭವ ವಷ್ಟೇ, ಚೈತ್ರ ಚುಂಬನದು
ರೋಮಾಂಚನ ತಂದ ಮಿಂಚು ಹರಿದು 
ಮೈ ರೋಮಗಳು ನಿಮಿರಿ ನಿಂತವೆಂತು 

ಸಾಕು ಸಾಕಿದೆಲ್ಲ, ಸೋಲುತಿಹೆನಲ್ಲ
ಎದೆತಾಳ ಇಂದೇಕೋ ತಪ್ಪುತಿದೆಯಲ್ಲ
ಸಲಿಗೆ ನಾ ಸರಿಸಿದಂತೆಲ್ಲ
ಆಕ್ರಮಣ ಅವನದು ಹೆಚ್ಚುತಿದೆಯಲ್ಲ
ಮೈ ಕೊಡವಿ ಗೆದ್ದೆನೆಂದುನಾ ಎದ್ದು ಬಿಡಲೇ

ಇಲ್ಲ !
ಅವನ ಹಿತದ ಹಿಡಿತದ
ಬಿಗಿಪಟ್ಟು ಬಿಡಿಸಿಕೊಳಲೋಲ್ಲೇ
ಮನ ಸೋತವಳು ನಾ ..
ಗೆದ್ದು ಹೊರಟುಬಿಡಲೊಲ್ಲೆ
ಸೂತುಬಿಡಲೇ...
ಕಳೆದಾವು ಆ ಮಧುರ ಕ್ಷಣಗಳು ಈಗಲೇ
ಇವನಿಗೆ ಇಂದು ನಾ ಸೋತುಬಿಡಲೆ

- ಸುಬ್ಬು 





3 comments:

  1. Tumba andavagi mudibandide nimma kavana:)

    ReplyDelete
  2. This comment has been removed by a blog administrator.

    ReplyDelete
  3. This comment has been removed by a blog administrator.

    ReplyDelete