Monday, 20 February 2012

ದಿಮಾಕು

ಕಟ್ಟಿಕೊಟ್ಟೀಯೇನೋ ಬ್ರಹ್ಮ
ಹಮ್ಮು ಬಿಮ್ಮುಗಳಿಲ್ಲದ ಲೋಕ
ಸಾಧಿಸಲು ಹೊರಟವನು ಏನೇನೋ-
ಸರ್ವರೊಳಗೊಂದಾಗುವುದೇ ಸಾಧನೆ
ಎಂದು ಸಾಧಿಸುವ ಲೋಕ

ಅಸಾಧ್ಯ ಬಿಡು ಅದು ನಿನಗೂ
ಸೃಷ್ಟಿಸಿದವನು ನಾನೆಂದು ಬೀಗಿ -
ಶಿವನಿಂದ ಒದೆ ತಿಂದವನು ನೀನು
ನಾನೆಂದು ಸೊಕ್ಕಿದ ನಾಲ್ಕರೋಳಗೊಂದು -
ರುಂಡ ಕಳೆದುಕೊಂಡವನು ನೀನು

ಕಂಡಿದ್ದೇನೆ ನಾನೂ, ನಿನಗಾಗದ್ದನ್ನು -
ಕಟ್ಟಲು ಹೊರಟವರನ್ನು
ಸೃಷ್ಟಿಗೆ ಸವಾಲು ಹಾಕಿದವರನ್ನು
ಸಮಾನತೆಯ ಆಶಾ ಗೋಪುರ ಕಟ್ಟಿ -
ಕಟ್ಟಕಡೆಗೆ ಕುಸಿದು ಬಿದ್ದವರನ್ನು

ಸಮಾಧಿ ಸೇರಿದರಲ್ಲೋ ..
ಸಮಾನತೆಯ ಪಣತೊಟ್ಟ ಮುಗ್ಧ -
ಅಸಮಾನ್ಯರು ಪಾಪ 
ಅಸಮಾನರಾಗಿಯೇ ಉಳಿದುಹೋದರು
ಆ ದಿಮಾಕಿನವರೆದುರಿಗೆ

ಎದ್ದವರು ಯಾರು.. ತುಳಿದು
ಸಂಪತ್ತುಗಳ ಬಾಚಿಕೊಂಡವರು
ಸರ್ವಾಧಿಕಾರದ ಮತ್ತಿನವರು
ಅಕ್ಷರ ನಿಶೆಯ ತಲೆಗೇರಿಸಿಕೊಂಡವರು
ಘನತೆ, ಗೌರವ, ಕೀರ್ತಿಗಳೆಂದು-
ಗತ್ತಿಗೆ ನೂರರ್ಥ ಕೊಟ್ಟವರು


ಇದಿರುವುದು ಹೀಗೆ ಏನೂ -
ಬ್ರಹ್ಮ ನಿನಗೂ ತಿಳಿಯದೇನೋ..

- ಸುಬ್ಬು 




















No comments:

Post a Comment