Monday 20 February 2012

ದಿಮಾಕು

ಕಟ್ಟಿಕೊಟ್ಟೀಯೇನೋ ಬ್ರಹ್ಮ
ಹಮ್ಮು ಬಿಮ್ಮುಗಳಿಲ್ಲದ ಲೋಕ
ಸಾಧಿಸಲು ಹೊರಟವನು ಏನೇನೋ-
ಸರ್ವರೊಳಗೊಂದಾಗುವುದೇ ಸಾಧನೆ
ಎಂದು ಸಾಧಿಸುವ ಲೋಕ

ಅಸಾಧ್ಯ ಬಿಡು ಅದು ನಿನಗೂ
ಸೃಷ್ಟಿಸಿದವನು ನಾನೆಂದು ಬೀಗಿ -
ಶಿವನಿಂದ ಒದೆ ತಿಂದವನು ನೀನು
ನಾನೆಂದು ಸೊಕ್ಕಿದ ನಾಲ್ಕರೋಳಗೊಂದು -
ರುಂಡ ಕಳೆದುಕೊಂಡವನು ನೀನು

ಕಂಡಿದ್ದೇನೆ ನಾನೂ, ನಿನಗಾಗದ್ದನ್ನು -
ಕಟ್ಟಲು ಹೊರಟವರನ್ನು
ಸೃಷ್ಟಿಗೆ ಸವಾಲು ಹಾಕಿದವರನ್ನು
ಸಮಾನತೆಯ ಆಶಾ ಗೋಪುರ ಕಟ್ಟಿ -
ಕಟ್ಟಕಡೆಗೆ ಕುಸಿದು ಬಿದ್ದವರನ್ನು

ಸಮಾಧಿ ಸೇರಿದರಲ್ಲೋ ..
ಸಮಾನತೆಯ ಪಣತೊಟ್ಟ ಮುಗ್ಧ -
ಅಸಮಾನ್ಯರು ಪಾಪ 
ಅಸಮಾನರಾಗಿಯೇ ಉಳಿದುಹೋದರು
ಆ ದಿಮಾಕಿನವರೆದುರಿಗೆ

ಎದ್ದವರು ಯಾರು.. ತುಳಿದು
ಸಂಪತ್ತುಗಳ ಬಾಚಿಕೊಂಡವರು
ಸರ್ವಾಧಿಕಾರದ ಮತ್ತಿನವರು
ಅಕ್ಷರ ನಿಶೆಯ ತಲೆಗೇರಿಸಿಕೊಂಡವರು
ಘನತೆ, ಗೌರವ, ಕೀರ್ತಿಗಳೆಂದು-
ಗತ್ತಿಗೆ ನೂರರ್ಥ ಕೊಟ್ಟವರು


ಇದಿರುವುದು ಹೀಗೆ ಏನೂ -
ಬ್ರಹ್ಮ ನಿನಗೂ ತಿಳಿಯದೇನೋ..

- ಸುಬ್ಬು 




















Friday 10 February 2012

ಅವನೊಡನೆ ಜಾರಿತು ಹೊತ್ತು ..

( ಹೆಣ್ಣಾಗಿ ಬರೆವಾಸೆ ..)

ಬಂದನಾ ನನ್ನಿನಿಯ,
ಬಂದೊಡನೆ ಕೆನ್ನೆಗೆ-
ಬಾರಿಸಿಬಿಡುವಷ್ಟು ಸಿಟ್ಟು 
ಅವನಿಗೆ ಕಾದ ಕಾಲವಿದು 
ಕಾದ ಕಾವಲಿಯಂತೆ 
ಸುಡುತಿವೆ ಚಿಂತೆಗಳು ಮನವ
ಮೈ ಸುಡುವ ಬಿಸಿಲೊಡನೆ 

ಸೋಲದಿರು ಮನವೇ,
ಈಬಾರಿಯೂ 
ಕರಗದಿರು ಅವನ-
ಪೊಳ್ಳು ನೆಪಗಳ ಕೇಳಿ
ಉಕ್ಕದಿರು ಪ್ರೀತಿ ಇಂದವನ ಮೇಲೆ  
ಸುಡುಕೂಪವಿದು ಕೊಂಚವಾದರೂ -
ಥಳಿಸಿ ತಣಿಯಲಿ ಅವನ

ಬಂದನಿಗೋ ಅವನೇ ..
ಹಾ .. ಅವನೇ ... 
ತಾಳು ತಾಳೆ ಮನವೇ,
ಅಯ್ಯೋ ..!
ತಣ್ಣಗಾದೆಯೇ ಇಂದೂ..
ಅವನ ಕಂಡೊಡನೆ
ಉರಿವ ಕೆಂಡದ ಸೂರ್ಯ 
ಮುಳುಗುವೀ ಹೊತ್ತಿನಲ್ಲಿ 
ಶಾಂತ ಸಾಗರದಿ-
ಮುಳುಗಿಯೇ ಬಿಟ್ಟನೇ..

ಕೆಂಡದಂಥಾ ಕೋಪದ ಹಿಂದೆ
ಬಚ್ಚಿಟ್ಟುಕೊಂಡಿತ್ತೆಲ್ಲಿ  ಅವನಮೇಲಿನ-
ಹುಣ್ಣಿಮೆಯ ತಂಪು ಅನುಕಂಪ
ನಗಿಸಿಬಿಟ್ಟನಲ್ಲಾ ನಲ್ಲ
ಈಬಾರಿಯೂ ಎರೆಡು ಮಾತಿನಲೇ
ಕೊಂದುಬಿಡಲೇ ಈಬಾರಿ-
ಎಂದುಕೊಂಡವಳ

ಕಂಡೊಡನೆ ಅವನ, ಉಕ್ಕಿತೆಕೆ
ನನ್ನೆದೆಯ ಭಾವ ಪ್ರವಾಹ
ಸ್ಥಬ್ದವಾಗಲಿ ಅವನೊಡನಿರುವ -
ಈ ಹೊತ್ತು ಎನುವ ಮೋಹ

ಬಂದವನು ಹರಟಿ ಬರಿ,
ಹೊರಟಾನೇನೋ
ಮುತ್ತೊಂದ ಕೇಳಿ ಕಸೆಯುವ ತುಮುಲ 
ಚುಂಬಿಸಲು ಬರಲವನ ತುಟಿಗಳು
ನಾಚಿದವು ಕೆನ್ನೆ, ಆಶೆಯಲಿ ಮುಂಗುರುಳು 
ಮುಚ್ಚಿದ ಕಣ್ಣುಗಳು ಕಂಡಿಲ್ಲ ಮುಂದಿನದ 
ಅನುಭವ ವಷ್ಟೇ, ಚೈತ್ರ ಚುಂಬನದು
ರೋಮಾಂಚನ ತಂದ ಮಿಂಚು ಹರಿದು 
ಮೈ ರೋಮಗಳು ನಿಮಿರಿ ನಿಂತವೆಂತು 

ಸಾಕು ಸಾಕಿದೆಲ್ಲ, ಸೋಲುತಿಹೆನಲ್ಲ
ಎದೆತಾಳ ಇಂದೇಕೋ ತಪ್ಪುತಿದೆಯಲ್ಲ
ಸಲಿಗೆ ನಾ ಸರಿಸಿದಂತೆಲ್ಲ
ಆಕ್ರಮಣ ಅವನದು ಹೆಚ್ಚುತಿದೆಯಲ್ಲ
ಮೈ ಕೊಡವಿ ಗೆದ್ದೆನೆಂದುನಾ ಎದ್ದು ಬಿಡಲೇ

ಇಲ್ಲ !
ಅವನ ಹಿತದ ಹಿಡಿತದ
ಬಿಗಿಪಟ್ಟು ಬಿಡಿಸಿಕೊಳಲೋಲ್ಲೇ
ಮನ ಸೋತವಳು ನಾ ..
ಗೆದ್ದು ಹೊರಟುಬಿಡಲೊಲ್ಲೆ
ಸೂತುಬಿಡಲೇ...
ಕಳೆದಾವು ಆ ಮಧುರ ಕ್ಷಣಗಳು ಈಗಲೇ
ಇವನಿಗೆ ಇಂದು ನಾ ಸೋತುಬಿಡಲೆ

- ಸುಬ್ಬು 





Monday 6 February 2012

ಅಂದು 
ನಾಗೆದ್ದೆ , ನಾಗೆದ್ದೆ 
ಎಂದು ಕುಣಿದು 
ನಗುತ ಕೇಕೆ ಹಾಕಿದ 
ಕ್ಷಣಗಳ ನೆನೆದು 
ಕಣ್ತುಂಬಿಬಂದಿತು ಇಂದು -
ನಾ ಗೆಲ್ಲಲೆಂದೇ 
ಅವನು ಸೋತಿದ್ದ 
ಎಂದು ತಿಳಿದು 

- ಸುಬ್ಬು 

Sunday 5 February 2012

ನೇರ ನೋಟ v/s  ಓರೆ ನೋಟ... 

ಕಾಡದೆ ಬಂದೆನ್ನ ಕೂಡು ಬಾ 
ಎಂದು ಆಹ್ವಾನ ಕೊಟ್ಟಿತ್ತು 
ನನ್ನ ನೇರ ನೋಟ -
ಕಾಡುವಲ್ಲಿನ ಸುಖ 
ಕೂಡಿ ಬಾಳುವಲ್ಲಿಲ್ಲ 
ಎಂದು ಉತ್ತರ ಕೊಟ್ಟಿತು 
ನಿನ್ನ ಓರೆ ನೋಟ

- ಸುಬ್ಬು 

Saturday 4 February 2012

ಕಲ್ಲಲ್ಲ ನನ್ನೀ ಕಲ್ಲು ಮೂರುತಿ...


ಬೆಟ್ಟದ ತುದಿಯಿಂದ 
ಕಡು ಬಂಡೆಯೊಂದ
ಕಡಿದು ತಂದೆನಂದು 

ಕೆತ್ತಿ ರೂಪವ ಕೊಟ್ಟೆ 
ನಯದ ಲೀಪವನಿತ್ತೆ 
ಕಳೆತಂದೆ ಕುಸುರಿಯಲಿ 
ಆಭರಣ ಮಾಡಿ

ಅರಳಿತಲ್ಲಿ ಸೋಬಗಿನಲಿ
ನನ್ನ ಕಲ್ಪನೆಯ ಬಿಂಬ 
ನಾ ಕಂಡೆ ಅಲ್ಲಿ-
ನನ್ನ ದೇವರನೆ

ಭಕ್ತಿ ಸುಧೆಯೋಳು ಮುಳುಗೆ 
ಕಲ್ಲು ಎಂಬುದ ಮರೆತು 
ನಡೆದಿತ್ತು ಮೌನದಲಿ -
ಪ್ರೀತಿಯ ಆರಾಧನೆ 

ಬಿಚ್ಚಿಕೊಂಡಿತು ಅಲ್ಲಿ 
ಅಂತರಾಳದ ಚಿತ್ರ 
ಪ್ರೆಮಮೂರ್ತಿಯೊಳು ಬೆರೆತು 
ಮೋಹ ಪ್ರೇಮವ ಬೆಸೆದು 
ಕಲ್ಲು ಕಲ್ಲಲ್ಲ 
ಮುರ್ತಿಯಾಯಿತು ಅಂದು 
ಜೀವ ತಂತಿಯ ಮಿಡಿದು 

ಕಲ್ಲು ಕಲ್ಲೆ ಎನುವುದನು
ಒಪ್ಪಲೇ ನಾನಿಂದು 
ಕಲ್ಲೋಳು ಬೆರೆತ -
ನನ್ನೀ ಭಾವ ಕಲ್ಲೇನು 
ದೇಹವಿಲ್ಲದೆ ಜೀವ ಉಳಿವುದೇನು 

- ಸುಬ್ಬು 


Friday 3 February 2012

ನಾನು ನೀನಾದಮೇಲೆ

ನಿನ್ನ ನಗುವಲಿ 
ಕಾಣುತಿಹೆನು ನನ್ನ ನಲಿವ
ನಿನ್ನ ನೋವನು ಮರೆಸುವಲಿ
ಮರೆತಿಹೆನು ನನ್ನೆಲ್ಲ ನೋವ 

ಮರೆತು ಹೋಗಿದೆ 
ಕನ್ನಡಿಯ ನನ್ನ ಬಿಂಬ 
ಕಣ್ ಮುಚ್ಚಿದಾಗೆಲ್ಲ -
ತುಂಬಿ ಕೊಳ್ಳುವೆ ನೀ ಕಣ್ ತುಂಬಾ 

ನನ್ನೊಳಗಿನ 
ನನ್ನ ಮರೆತೆ
ನಿನ್ನೊಳಗೆ -
ನನ್ನ ಕಾಣುವುದ ಕಲಿತೆ 

ನಾನು ನೀನಾದಮೇಲೆ
ಮರೆ ನಿನ್ನ-
ಎಂದರೆ ಅರ್ಥವೇನು 
ಇದುವೇ ನಿಜ ಪ್ರೀತಿ ಅಲ್ಲವೇನು 

ಸುಬ್ಬು