Friday 8 June 2012

ಒ0ದು ನೋಟದ ಪ್ರೇಮ 

ನಿನ್ನ ಕಂಠದ ಸಿರಿಗೆ,
ನಿನ್ನ ಬಣ್ಣದ ಮೆರುಗಿಗೆ,
ಮಾರುಹೋಗಿ ಬಿದ್ದೆ ನಾ 
ನಿನ್ನ ಹಿಂದೆ-
ನಾನೊಬ್ಬ ಆಲೆಮಾರಿ 

ಸೆರೆಯಾದೆ ನೀ ಕಂಡ0ದೇ 
ನನ್ನ ಕಂಗಳಲಿ 
ನೂರು ಗಾವುಗ ದೂರ 
ನೀ ಕಂಡರೂ ಸರಿಯೇ 
ಗುರುತಿಸಬಲ್ಲೆ ನಿನ್ನ ನಾ ನಲ್ಲೆ 

ಒಮ್ಮೆ ಕಂಡವಳು 
ಮತ್ತೆಂದು ಕಾಣುವೆಯೋ 
ಕದ್ದು ನಿನ್ನನೆ ನೋಡುವಾಸೆ 
ಮುಟ್ಟದೆ ಮುದ್ದಾಡುವಾಸೆ 
ಹಾರಿ ಹೋಗದಿರೆ ಚನ್ನೆ 
ನಾ ಹತ್ತಿರಾದೊಡನೆ 

ನೂರು ಬಣ್ನದ ಜಾತಿ 
ನಿಮ್ಮವರಲೂ 
ನಿನ್ನಕ್ಕ ತಂಗಿಯರು 
ನಿನ್ನನ್ನೇ ಹೋಲುವರು 
ಆದರೂ ನೀ ನೀನೆ -
ನಿನಗಿದೋ ನಾನಿಡುವೆ 
ಮುದ್ದು ಹೆಸರು 

ನನ್ನ ಪ್ರೇಮದ ಪರಿಯ 
ಇವರೇನು ಬಲ್ಲರು?
ಹಲವರು ಆಡಿ ನಕ್ಕರು 
ಕೆಲವರು ಹೊಗಳುಭಟರು 
ಮೌನದಲೇ
ನಸುನಕ್ಕು ನಡೆದೆ  -
ನಿನ್ನ ಹುಡುಕುತಲಿ 

ಮೋಹಿ ಪಂಜರಗಳು 
ಹಬ್ಬುತಿರೆ ದರ್ಪದಿ 
ವಿರಳವಾಗಿತಿಹ 
ನಿನ್ನ ಬಳಗದ ಮೇಲೆ 
ಅರಳಿತೇಕೋ ನನ್ನೆದೆ ಪ್ರೇಮ 
ನಾನೊಬ್ಬ ಪಕ್ಷಿ ಪ್ರೇಮಿ 

- ಸುಬ್ಬು